Thursday 10 April 2014

ಕಾಗದ -ಜೀವನ

ಕಾಗದವು ಹರಿಯುತ್ತಿದೆ
ನದಿಯೂ ಹರಿಯುತ್ತಿದೆ
ಚೂರಾಗುವುದರಲ್ಲಿ ಪಾರಗವು ವಿದ್ಯೆಯೂ ಇದೆ
ಸಿಹಿ ನೀರು ಉಪ್ಪಾಗುವ ಬೀತಿಯಲ್ಲಿ
ಹಿಂದೆ ಸರಿಯುತ್ತಿಲ್ಲ.

ಕೊಳೆಯಾತ್ರನೆಂದು ಕಾಗದದ
 ಬಿಳಿ ಮಸಿಯ ಬಳಿ ನಾಚುವುದಿಲ್ಲ
ಆವಿಯಾಗಿ ಉಳಿದದ್ದು ಭವಿಷ್ಯದ ಹರಿವು
ಆವೆಯಾಗದೆ ಉಳಿದದ್ದು ಶಾಶ್ವತದ ಉಳಿವು

ಮೌನವು ಉಳಿಯಬೇಕೆಂದರೆ
ಪದಗಳಲಿ ಹೆಜ್ಜೆ ಹಾಕಬೇಕು
ಶಬ್ದ ಸಂಗಾತ ಬದುಕಬೇಕು
ಕಾಗದ ಕಾಗದವಷ್ಟೇ ಆಗಿ ಎಷ್ಟು ದಿನ ಉಳಿದಿತು?

ಅದಕ್ಕೂ ಬರಹದ ಸಂಗಬೇಕು
ಹೊಸ ಸೃಷ್ಟಿಗೆ ಹೊಸ ದೃಷ್ಟಿಗೆ
ನದಿಗೆ ದಡ ಮೈದಡವಿ
ಕೂಡುವುದಕ್ಕೆ ಸಜ್ಜುಮಾಡಬೇಕು

ಆಕಾಶ,ನೆಲ,ನೀರಿನಲಿ ಒಂದಾಗಬೇಕು
ದೃಷ್ಟಿ ಸೃಷ್ಟಿಯ ಸೇರಿ
ಹೊಸ ಬಗೆಯ ಬದುಕನು ಬಗೆಯಬೇಕು
ಕವಿತೆ ಕಾಗದದ ಮೇಲೆ ನದಿಯಂತೆ ಹರಿಯಬೇಕು...

Saturday 15 March 2014

ಕಿರು ಹಣತೆ....

ಹಳೆಯ ಕನಸೊಂದು ಚಿಗುರೊಡೆದು
ಬೆಳೆಯುತ್ತಿದೆ ಕಿರು ಹಣತೆಯಂತೆ
ಅದರ ಈ ದಡದಲ್ಲಿ ಒಂದು ಮನಸ್ಸು
ನಿಂತು ಬಿಟ್ಟಿದೆ ನಿಂತಲ್ಲೇ ಮಹಾತಪಸ್ವಿಯಂತೆ...
ಮನಸ್ಸಿನ ಮೂಲೆಯಲ್ಲಿ ಮೊಳೆತ
ಈ ಭಾವ ಆಕಾಶವನ್ನೇ ತಲೆಯಲ್ಲಿ ಹೊತ್ತ
 ಆ ಕನಸಿನಲ್ಲಿ ಯಾರೋ ಬಿಸಾಡಿದ
ಕನಸಿನ ಚೂರುಗಳು...
ಎದೆಯ ಭಾವದ ತೊಡಲಾಟ
ಎಲ್ಲೋ ಒಂದು ಕಡೆ ಸಿಂಚನ ಕನಸಿನಲ್ಲಿ ತೇಲುತ್ತಿದೆ...
ನಿಂತ ಮನಸ್ಸಿನ ಕೈ ಸೋತಿಲ್ಲ ಇನ್ನೂ
ಕನಸಿನ ಹಾಡಿಗೆ ಕಂಪಿಸಿ
ಮೆಲ್ಲಗೆ ಚಿಗುರೊಡೆದಿದೆ
ಕಿರು ಹಣತೆಯಂತೆ.....







Wednesday 27 July 2011

ಪ್ರೀತಿ-ಎಂದೋ ಕಂಡ ಕನಸಿನ ಹುಡುಗ.....


ನನ್ನ ಕನಸಿನ ಹುಡುಗ
ಎಲ್ಲಿ ಹೋದನೋ ಏನೋ..

ಗಾಳಿಯಲಿ  ತೇಲಿದನೋ
ನೀರಲಿ ಮುಳುಗಿದನೋ
ನನ್ನ ಪ್ರೀತಿಯ ಹುಡುಗ
ಎಲ್ಲಿ ಹೋದನೋ ಏನೋ

ಬಾ ಎಂದು ಕರೆದಾಗ
ಕಣ್ಮುಚ್ಚಿ  ಕಾಡುವನು.
ಬರೆದಿಟ್ಟ ಹಾಡಲ್ಲಿ
ದ್ವನಿಯಾಗಿ ಹಾಡುವನು.

ಮುತ್ತುಗಳ ಮಾತಲ್ಲಿ
ಏನೇನೋ ಕೊಟ್ಟವನು.
ಸಂಪಿಗೆಯೋ,ಮಲ್ಲಿಗೆಯೋ
ನೀನೆ ನನಗೆಂದವನು.

ತೆರೆದಿಟ್ಟ ಬಾಗಿಲಲಿ
ಆವ ಕಾಣಲಿಲ್ಲ.
ಬಂದಿತ್ತು ಬಿರುಗಾಳಿ
ಆವ ಬರಲೇ ಇಲ್ಲ

ನನ್ನ ಕನಸಿನ ಹುಡುಗ
ಎಲ್ಲಿ ಹೋದನೋ ಏನೋ..

Tuesday 19 July 2011

ಕನಸ ಪ್ರೀತಿ ಹನಿ.....

ಓ ಕನಸೇ ಓ ಮನಸೇ

ಎಂಥ ವಿಚಿತ್ರ ನೋಡು

ನಿನ್ನ ಬಯ್ಯುತ್ತಲೇ ಮೈದಡವುತಲೇ

ತಿರಸ್ಕರಿಸುತಲೇ ಅಪ್ಪುತಲೇ

ಬದುಕೆಲ್ಲಾ ಸಾಗಿಬಿಡುತ್ತದೆ


ಓ ಕನಸೇ

ಹದಿಹರೆಯದ ಎದೆಗೂಡಲ್ಲಿ

ಮೊಟ್ಟೆ ಇಡುವೆ ಅಡ್ಡಾಡುತ ಕಾಪಾಡುವೆ

ಮನಸಿನ ಕಾವಲಿಗೆ ಕಾವಿಗೆ

ಮರಿಯಾಗುವ ತವಕ


ಓ ಮನಸೇ

ನೀನೇಕೆ ಹೀಗೆ?ಕನಸ ಹಿಂಬಾಲಿಸುವೆ

ಗಾಳಿಯಂತೆ ನುಲಿಯುವೆ ತೇಲುವೆ

ಸುಯ್ಯುವೆ ಬಿರುಗಾಳಿಯಂತೆ


ಇದು ಎಂಥಾ ಜೀವ?

ಬೇಡ ಬೇಡ ಎನ್ನುವುದು ತುಟಿ

ಮೇಲಿನ ಮಾತಯಿತಲ್ಲ

ಮಳೆಬಿಲ್ಲಿನ ಮೋಹ ಕರಗದೆ

ನಿರೀಕ್ಷೆ ಗೆದ್ದಿತಲ್ಲ


ಪದ ಮೀರಿ ಮನಸ ಹಂಗಾಗಿ

ಬದುಕೆಲ್ಲ್ಲ ಹೂಹಾಸ ಕನಸು

ನಾನು ನಾನೇ ಎಂಬ ಹೊಂಗನಸು

ಎಂಥ ಮಾತಿದು ಎಂಥ ಕನಸಿದು?

.........................

Wednesday 29 June 2011

ಹುಸಿ-ಹನಿ

ಹುಸಿ ಮುನಿಸಿನ ಮರೆಯಲಿ ಒಲವಿದೆ
ಕಚಗುಳಿ ಇಡುವಂತ ಕಲೆ ಇದೆ!

ಹುಸಿ ಕೋಪದ ನೆರಳಲಿ ತಂಪಿದೆ
ಮನನವಿರೇಲಿಸುವಂತ ಕಂಪಿದೆ!

ಹುಸಿ ಮೌನದ ಬೆನ್ನಲ್ಲೆ ಮಂದಹಾಸವಿದೆ
ಸ್ಪರ್ಶಿಸಲಾಗದಂತ ಸ್ನೇಹವಿದೆ!

ಹುಸಿ ಮಂಪರಿನ ರೆಪ್ಪೆಯಡಿ ಕನಸಿದೆ
ಸ್ಪಂದಿಸುವ ಮನಸಿದೆ!

ಹುಸಿ ಧೈರ್ಯದ ಚಾವಿನಡಿ ಮೃದು ಮೊಗ್ಗಿದೆ
ನೀರಾಗಿಸುವ ಸಿಗ್ಗಿದೆ!

Wednesday 1 June 2011

ಕವಿಯ ಕಥನ...

ಜಗವ ಮೆಚ್ಚಿಸಲು ಪದಗಳ ಪೋಣಿಸಲಿಲ್ಲ...
ಪ್ರಚಾರ ಪ್ರಸಿದ್ದಿ..ಅದೆಂತೋ ರುಚಿಸದಲ್ಲ..!


ಮನದ ಭಾವ ಇಳಿಸಲು ಲೇಖನಿ ಆಸರೆ
ತಲೆದೂಗಿ ಹೌದು ಎಂದೆ...ಇಬ್ಬರಿದ್ದರೂ ಅಕ್ಕರೆ


ಹೀಗೆ ಈ ಬರಹ....ನಿರ್ಧರಿಸುವ ಅವಕಾಶವೆಲ್ಲಿ..?
ತೋಚಿದ್ದು ಗೀಚಿದಾಗ ಏಕತಾನವಿನ್ನೆಲ್ಲಿ...?


ಅವರು,ಇವರು...ಆಗಬೇಕೆಂದು ಎಂದೂ ಬಯಸಿದ್ದಿಲ್ಲ
ನನ್ನತನವ ಉಳಿಸಿ....ಬೆಳಸದೆ ಸಾರ್ಥಕವಿಲ್ಲ...

ಪ್ರಾಕಾರ ಛಂದಸ್ಸು,ಶೈಲಿ..ಅರಿಯದ ಬಲೆ...,
 ಹೇಳುವುದೇ...ಸವಿಯಾದ ಕಲೆ.....!!
,

ಮತ್ತದೇ ಬೇಸರದಿಂದ ಹೊರಬಂದು.....

ಮನಸ್ಸಿಗೆ ಸಂತೋಷವಾದಾಗ,ದುಃಖವಾದಾಗ ಕಾಗದಮೇಲೆ ಏನಾದರು ಗೀಚುತ್ತಿದ್ದ ನನಗೆ "ಬ್ಲಾಗ್" ಬಗ್ಗೆ ತಿಳಿದಿದ್ದು ಸುಮಾರು ವರ್ಷದಹಿಂದೆ...ನನಗೆ ಬ್ಲಾಗ್ ಬಗ್ಗೆ ತಿಳಿಸಿದ್ದು ಪರಿಸರಪ್ರೇಮಿಯವರು ಮತ್ತು ಶ್ರೀನಿಧಿ.ಇವರಿಬ್ಬರ ಸಹಾಯದಿಂದ "ಸಮನ್ವಯ"ಬ್ಲಾಗ್ ಪ್ರಾರಂಭಿಸಿ ಅನೇಕ ಕವಿತೆಗಳನ್ನ ಬರೆದು ಅಲ್ಲಿ ಪ್ರಕತಿಸಿದ್ದೆ..ಎಲ್ಲರೂ ಪ್ರೋತ್ಸಾಹಿಸಿದರು..ಸಮಯ ಕಳೆದಂತೆ ಇದು ಹವ್ಯಾಸವಾಗಿ ಬೆಳೆಯಿತು......ಆದರೆ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಬ್ಲಾಗ್ ಮಾಯಾ ಆಗ್ಬಿಟ್ಟಿತ್ತು..:(:( ಸಿಕ್ಕಾಪಟ್ಟೆ ಬೇಸರಗೊಂಡು
ಮತ್ತೆ ಬ್ಲಾಗಿಸುವ ಗೋಜಿಗೆ ಹೋಗಲೇ ಇಲ್ಲ...


ದಿನಕಳೆದಂತೆ, ಏನನ್ನೋ ತುಂಬಾ ಮಿಸ್ ಮಾಡ್ಕೋತಿದ್ದಿಯಾ ಅಂತ ಮನವು ಕಂಪಿಸುತಿತ್ತು:(..ಈಗ ಮತ್ತೆ ಜೂನ್ ಗುರುವಾರ ೨೦೧೧(೧೨:೩೨ನಿಮಿಷ ) ಮದ್ಯರಾತ್ರಿ ನಿದ್ದೆಯಿಂದ ಎದ್ದು ಇವತ್ತು ಮತ್ತೆ ಬ್ಲಾಗಿಸಲು ಮನ ತುಡಿಯಿತು...ಅಂತೆಯೇ ಶುರುಮಡಿಯೇ ಬಿಡೋಣ ಅಂತ..ಈ ಮೊದಲ ಅಂಕಣ...
 ನೀವೆಲ್ಲಾ ಈ ಬ್ಲಾಗ್ ಓದೋದರ ಬಗ್ಗೆ ಉತ್ಸಾಹ, ಶ್ರದ್ಧೆ
ಮತ್ತು ಪ್ರೀತಿ ಮುಂದುವರಿಸುತ್ತಿರಾಯೆಂಬ ನಂಬಿಕೆಯಲ್ಲಿ....